ಶ್ರೀ ಕೃಷ್ಣನ ಚಿತ್ರಗಳು
ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿ! ಕೃಷ್ಣ, ಈ ಹೆಸರೇ ಮೋಡಿ ಮಾಡುವಂಥದ್ದು. ಕೋಟಿಗಟ್ಟಲೆ ಭಾರತೀಯರ ಇಷ್ಟ ದೇವತೆ, ರಾಧೆಯ ಪ್ರೇಮಿ, ಗೊಲ್ಲರ ಸ್ನೇಹಿತ, ಭಾರತೀಯರ ಹೃದಯದಲ್ಲಿ ಕೃಷ್ಣನಿಗೆ ಮಹತ್ವದ ಸ್ಥಾನವಿದೆ. ಈ ಜನಪ್ರಿಯ ದೇವತೆಯನ್ನು ಅನೇಕ ಕಲಾವಿದರು ತಮ್ಮ ಕಲಾ ಕುಂಚದಿಂದ ಸುಂದರವಾಗಿ ಚಿತ್ರಿಸಿದ್ದಾರೆ.ಈ ಎಲ್ಲಾ ವರ್ಣಚಿತ್ರಗಳು 17 ರಿಂದ 18ನೇ ಶತಮಾನಕ್ಕೆ ಸೇರಿವೆ. ಈ ಅವಧಿಯಲ್ಲಿ ಹೆಚ್ಚಿನ ಕಲೆ ರಾಜಾಶ್ರಯದ ನೆರವಿನಿಂದಲೇ ಅಭಿವೃದ್ಧಿ ಹೊಂದಿದವು. ಮೊಘಲ್, ಕಾಂಗ್ರಾ ಶೈಲಿಯಲ್ಲಿ ಕಾಣುವ ಈ ವರ್ಣಚಿತ್ರಗಳು ಗಾತ್ರದಲ್ಲಿ ಚಿಕ್ಕದಾದ, ಪರಿಪೂರ್ಣವಿವರಣೆ ಕೊಡುವ ಮತ್ತು ಸೌಂದರ್ಯದ ಉತ್ತಮ ಉದಾಹರಣೆಯಾಗಿದೆ. ಈ ಕಲಾ ಸಂಗ್ರಹವು ಅತ್ಯುತ್ತಮವಾಗಿದ್ದು ದುರದೃಷ್ಟವಶಾತ್ ಇದು ವಿದೇಶಿ ವಸ್ತುಸಂಗ್ರಹಾಲಯಗಳ ವಶದಲ್ಲಿದೆ. ಆದ್ದರಿಂದ, ನಾವು ಈ ಕಲಾಕೃತಿಗಳನ್ನು ಕೇವಲ ಫೋಟೋದಲ್ಲಿ ಮಾತ್ರ ನೋಡಬಹುದು. ಶ್ರೀಮಂತ ಭಾರತೀಯ ಕಲಾ ಸಂಪ್ರದಾಯದಲ್ಲಿ ಚಿತ್ರಿಸಲಾಗಿರುವ ಈ ಕೃಷ್ಣ ವರ್ಣಚಿತ್ರಗಳು ನಿಮಗಾಗಿ... ಉದ್ಯಾನದಲ್ಲಿ ರಾಧಾಕೃಷ್ಣ (1830) ಈ ಚಿತ್ರದಲ್ಲಿ ರಾಧಾಕೃಷ್ಣ ಉದ್ಯಾನದಲ್ಲಿ ನಿರಾಳವಾಗಿ ಕುಳಿತಿದ್ದಾರೆ. ಇಬ್ಬರಲ್ಲಿಯೂ ಮಧುರ ಸಂಭಾಷಣೆ ನಡೆಯುತ್ತಿದೆ. ಸೇವಕಿಯರು ಇಂಪಾದ ಲಲಿತವಾದ ಸಂಗೀತವನ್ನು ನುಡಿಸುತ್ತಿದ್ದಾರೆ. ಸೇವಕಿಯರು ಸೇವೆ ಮಾಡಲು ಸಿದ್ಧರಾಗಿದ್ದಾರೆ. ತುಂಬಾ ಸುಂದರ ಮತ್ತು ಸೂಕ್ಷ್ಮ ವಿವರಗಳೊಂದಿಗೆ ಚಿತ್ರಿಸಿದ ಉದ್ಯಾನವು ಹೃದಯಸ್ಪರ್ಶಿ...