ಸಾವ್ಲಾರಾಮ್ ಹಲ್ದಣ್ಕರ್ - ಜಯ ಸಾಲ್ಯಾನ್, ಮುಂಬೈ.

ಸಾವ್ಲಾರಾಮ್ ಹಲ್ದಣ್ಕರ್ 

ಸರಳವಾದ ಸುಲಭ ವಿಷಯದಿಂದ ವಿಶಾಲ ದೃಷ್ಟಿಕೋನವನ್ನು ವ್ಯಕ್ತಪಡಿಸುವ ಕೌಶಲ್ಯ ಶ್ರೀ. ಸಾವ್ಲಾರಾಮ್ ಲಕ್ಷ್ಮಣ್ ಹಲ್ದಣ್ಕರ್ ಅವರ ವರ್ಣಚಿತ್ರಗಳಲ್ಲಿತ್ತು. ಚಿತ್ರಕಲೆಯ ಜಲವರ್ಣ ಮತ್ತು ತೈಲವರ್ಣ ಮಾಧ್ಯಮಗಳಲ್ಲಿ ಅವರು ವಿಶೇಷ ಖ್ಯಾತಿ ಹೊಂದಿದ್ದರು. ೨೯ ನವೆಂಬರ್ ೧೮೮೨, ಕೊಂಕಣದ ಸಾವಂತ್ವಾಡಿಯಲ್ಲಿ ಜನಿಸಿದ ಅವರು ತನ್ನ ಮೂರನೆಯ ವಯಸ್ಸಿನಲ್ಲಿ ತಂದೆಯನ್ನು ಕಳಕೊಂಡರು. ಬಾಲ್ಯದ ಕಷ್ಟಕರ ಪರಿಸ್ಥಿತಿಯಲ್ಲೂ ಅವರ ಮನಸ್ಸು ಚಿತ್ರಕಲೆಯತ್ತ ಆಕರ್ಷಿತವಾಗತೊಡಗಿತ್ತು. ಕಲಾ ಶಿಕ್ಷಕ ಶ್ರೀ ಎನ್. ಎಸ್. ಮಾಲಂಕರ್ ಅವರ ಕಲಾತ್ಮಕತೆಯನ್ನು ನೋಡಿ, ಗ್ರೇಡ್ ಪರೀಕ್ಷೆಯನ್ನು ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಿದರು. ೧೯೦೩ ರಲ್ಲಿ, ಅವರು ಸರ್ ಜೆ.ಜೆ. ಕಲೆ ಪ್ರವೇಶ ಪರೀಕ್ಷೆ ನೀಡಿ ಕಾಲೇಜಿಗೆ ಪ್ರವೇಶಿಸಿದರು. ಅಲ್ಲಿ ಅವರು ಪ್ರಮುಖ ಕಲಾ ಶಿಕ್ಷಕರಾಗಿದ್ದ ಗಣಪತ್ ರಾವ್ ಕೇದಾರಿ, ತ್ರಿದಾಂದ್, ಆಗಾಸ್ಕರ್, ವಾಲ್ಟರ್ ರೆಬ್ರೊಥಾಮ್ ಅವರನ್ನು ಭೇಟಿಯಾಗಿ ಅವರಿಂದ ಅಮೂಲ್ಯವಾದ ಮಾರ್ಗದರ್ಶನ ಪಡೆದರು. ಚಿತ್ರಕಲೆಯಲ್ಲಿ ಅವರು ಪಡೆದ ಪ್ರಾವೀಣ್ಯತೆಯಿಂದಾಗಿ ೧೯೦೭ ರಿಂದ ಒಬ್ಬ ವರ್ಣಚಿತ್ರಕಾರನಾಗಿ ಪ್ರಸಿದ್ಧರಾದರು. ಅವರ ವರ್ಣಚಿತ್ರಗಳು ಮುಂಬೈ, ಚೆನ್ನೈ, ಕೋಲ್ಕತಾ, ಮತ್ತು ಶಿಮ್ಲಾದಲ್ಲಿ ನಡೆದ ಕಲಾ ಪ್ರದರ್ಶನದಲ್ಲಿ ಮಿಂಚಲಾರಂಭಿಸಿತು. ಅವರು ಮುಖ್ಯವಾಗಿ ಭಾವಚಿತ್ರ, ನಿಸರ್ಗಚಿತ್ರ ಮತ್ತು ಪೌರಾಣಿಕ ವರ್ಣಚಿತ್ರಗಳನ್ನು ಬರೆಯುತ್ತಿದ್ದರು. ಅವರ 'ಗ್ಲೋ ಆಫ್ ಹೋಪ್', 'ನಿರಾಂಜನಿ', 'ಅಮಿರಿ ಇನ್ ಫಕಿರಿ' ಮುಂತಾದ ಚಿತ್ರಗಳು ಬಹಳ ಪ್ರಸಿದ್ಧವಾಗಿವೆ. 'ಗ್ಲೋ ಆಫ್ ಹೋಪ್' ಅವರ ಹೆಸರುಹೋದ ಚಿತ್ರರಚನೆ. ಮೈಸೂರಿನ ಜಯಚಮರಾಜೇಂದ್ರ ಆರ್ಟ್ ಮ್ಯೂಸಿಯಂನಲ್ಲಿದೆ.

ಅವರ 'ಗ್ಲೋ ಆಫ್ ಹೋಪ್' ಚಿತ್ರಕಲೆಯ ಕಥೆ ಬಹಳ ರಂಜಕವಾಗಿದೆ. ದೀಪಾವಳಿಯಲ್ಲಿ ಅವರ ಹದಿನಾರು ವರ್ಷದ ಮಗಳು ಗೀತಾ (೧೯೩೨ ರಲ್ಲಿ) ತಾಯಿಯ ಸಾತವಾರಿ ಸೀರೆಯನ್ನು ಉಟ್ಕೊಂಡು ತಾಯಿಗೆ ದೀಪ ಹಚ್ಚಲು ಸಹಾಯ ಮಾಡುತ್ತಿದ್ದಳು. ದೀಪ ಆರಿ ಹೋಗದಂತೆ ದೀವಿಗೆಯ ಸುತ್ತ ಕೈ ಹಿಡಿದಳುಇದನ್ನು ನೋಡಿದ ಸಾವ್ಲಾರಾಮ್ ಹಲ್ದಣ್ಕರ್  ಅವರಿಗೆ ಇದ್ದಕ್ಕಿದ್ದಂತೆ ವಿಶ್ವಪ್ರಸಿದ್ಧ ವರ್ಣಚಿತ್ರದ ಕಲ್ಪನೆ ಹೊಳೆಯಿತು. ಸತತ ಮೂರು ದಿನ, ಮೂರು ಗಂಟೆಗಳ ಕಾಲ, ಗೀತಾ ಮಾಡೆಲ್ ಆಗಿ ಅವರ ಮುಂದೆ ನಿಂತರು ಮತ್ತು 'ಗ್ಲೋ ಆಫ್ ಹೋಪ್'ಎಂಬ ಅದ್ಭುತ ಕಲಾಕೃತಿಯ ನಿರ್ಮಾಣವಾಯಿತು. ಮೈಸೂರು ಒಡೆಯರು ಮಾಸ್ಟರ್ ಪೀಸ್ ವರ್ಣಚಿತ್ರವನ್ನು ಕೇವಲ ಮುನ್ನೂರು ರೂಪಾಯಿಗೆ ಖರೀದಿಸಿದರು. ಇಂದು ಚಿತ್ರದ ಬೆಲೆ ಕೋಟಿಯಲ್ಲಿದೆ. ಚಿತ್ರದಲ್ಲಿನ ಬೆಳಕಿನ ಯೋಜನೆ ಹೇಗಿದೆಯಂದರೆ, ಗೀತಾ ಅವರ ಗದ್ದದ ಮತ್ತು ಮುಖದ ಮೇಲೆ ಅವರು ಹಿತ್ತಾಳೆ ತೈಲ ದೀಪದ ಮೇಲೆ ಹಿಡಿದಿರುವ ಕೈಯಿಂದ ಪ್ರಕಾಶವು ಪ್ರತಿಫಲಿಸಿದಂತೆ ಚಿತ್ರಿಸಲಾಗಿದೆ. ಹೊರಸೂಸಲ್ಪಟ್ಟ ಬೆಳಕಿನ ಅದ್ಭುತ ಚಿತ್ರಣವು ಅವರ ಕಲಾ ಪಾಂಡಿತ್ಯಕ್ಕೆ ಸಾಕ್ಷಿಯಾಗಿದೆ. ಅವರ ಯಾವುದೇ ಚಿತ್ರಗಳಲ್ಲಿ ಗಾಢವಾದ ಬಣ್ಣದ ಬಳಸುವಿಕೆ ನಮಗೆ ಕಾಣುವುದಿಲ್ಲ. ಮಧ್ಯಮ ಬಣ್ಣದ ಪ್ಯಾಲೆಟ್, ಅತ್ಯಂತ ಸೂಕ್ಷ್ಮ ವಾಗಿ ಬೆಳಕು ಮತ್ತು ನೆರಳಿನ ವಾತಾವರಣವನ್ನು ಸಹಜವಾಗಿ ಸೃಷ್ಟಿಸುವ ಕೌಶಲ್ಯವನ್ನು ಅವರು ಹೊಂದಿದ್ದರು. ಜಲರಂಗದಲ್ಲಿ ಅವರ ಎತ್ತಿದ ಕೈ. ನಾನಾ ಶಂಕರ್ ಶೇಠ್, ಮಫತ್ಲಾಲ್ ಗಗನ್ಭಾಯ್, ಶಿಕ್ಷಣ ಮಹರ್ಷಿ ಧೋಂಡೋ ಕೇಶವ್ ಕರ್ವೆ ಇತ್ಯಾದಿ. ಪ್ರತಿಷ್ಠಿತ ವ್ಯಕ್ತಿಗಳ ವೃತ್ತಿಪರ ವ್ಯಕ್ತಿಚಿತ್ರಗಲು ಹೆಚ್ಚು ಪ್ರಸಂಶೆಗೆ ಒಳಗಾದವು. ಭಾರತ ಸರಕಾರಕ್ಕಾಗಿ ಪಂ. ಮದನ್ ಮೋಹನ್ ಮಾಲ್ವಿಯಾ ಅವರ ವ್ಯಕ್ತಿಚಿತ್ರವನ್ನು ರಚಿಸಿದ ಕೀರ್ತಿ ಅವರದ್ದಾಗಿದೆ. ಭಾವಚಿತ್ರಕ್ಕಾಗಿ ಅವರನ್ನು ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರ ಶುಭ ಹಸ್ತದಿಂದ ಗೌರವಿಸಲಾಯಿತು. ೧೯೨೫ ರಲ್ಲಿ ಮುಂಬೈನ 'ಬಾಂಬೆ ಆರ್ಟ್ ಸೊಸೈಟಿ' ಚಿನ್ನದ ಪದಕವನ್ನು ಅವರಿಗೆ ನೀಡಲಾಯಿತು. ೧೯೬೨ ರಲ್ಲಿ ದೆಹಲಿಯ 'ಲಲಿತ್ ಕಲಾ ಅಕಾಡೆಮಿ'ಯವರು ಪ್ರೋತ್ಸಾಹಿಸಿ ಫೆಲೋಶಿಪ್ ಕೊಟ್ಟು ಸನ್ಮಾನಿಸಿದರುಸರ್ ಜೆ.ಜೆ. ಕಲಾ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿರುವಾಗಲೇ, ಭಾರತೀಯ ಕಲೆಯ ಪುನರುಜ್ಜೀವನಕ್ಕಾಗಿ ಏನಾದರೂ ಮಾಡಬೇಕೆಂಬ ಆಲೋಚನೆಗಳು ಅವರು ಮತ್ತು ಅವರ ಸಮಕಾಲೀನ ವರ್ಣಚಿತ್ರಕಾರರ ಮನಸ್ಸಿನಲ್ಲಿ ಬರುತ್ತಿತ್ತು. ಆದರೆ ಸಮಯದಲ್ಲಿ ಅಸ್ತಿತ್ವದಲ್ಲಿದ್ದ ಬ್ರಿಟೀಷರ ಕಲಾ ಸಂಸ್ಥೆಗಳ ಮೇಲೆ ಇರುವ ಪ್ರಾಬಲ್ಯದಿಂದಾಗಿ ಅವರು ತಮ್ಮ ಸಹಪಾಠಿ ಪರಾಂದೇಕರ್ ​​ಮತ್ತು ಶಿಲ್ಪಿ ಬಾಲಾಜಿ ತಾಲಿಮ್ ಅವರೊಂದಿಗೆ ಸೇರಿ ಉದಯೋನ್ಮುಖ ಕಲಾವಿದರನ್ನು ಪ್ರೋತ್ಸಾಹಿಸುವ ದೃಷ್ಟಿಕೋನದಿಂದ 'ಆರ್ಟ್ ಸೊಸೈಟಿ ಆಫ್ ಇಂಡಿಯಾ' ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಅವರು ಉತ್ತಮ ಕಲಾ ಶಿಕ್ಷಕರಾಗಿದ್ದರು ಮತ್ತು ಶಾಸ್ತ್ರೀಯ ಸಂಗೀತದ ಅಭಿಜ್ಞರಾಗಿದ್ದರು. ತಮ್ಮ ಚಿತ್ರಕಲೆಯ ಬಗ್ಗೆ ಅವರಿಗೆ ಅಭಿಮಾನವಿತ್ತು. ದುರದೃಷ್ಟವಶಾತ್, ನಂತರದ ಜೀವನದಲ್ಲಿ ಅವರ ಕಣ್ಣಿನ ದೃಷ್ಟಿ ಕಡಿಮೆಯಾಗುತ್ತ ಹೋಯ್ತು. ಅವರು ಮೇ ೩೦೧೯೬೮ ರಂದು ನಿಧನರಾದರು.

ಕಲೆಯನ್ನು ಸಾಧಿಸಿದ ಒಬ್ಬ ಸಿದ್ಧ ವರ್ಣಚಿತ್ರಕಾರನಾಗಿ ಪ್ರೇಕ್ಷಕರು ಅವರನ್ನು ಈಗಲೂ ನೆನಪಿಸಿಕೊಳ್ಳುತ್ತಾರೆ.

- ಜಯ ಸಾಲ್ಯಾನ್, ಮುಂಬೈ. 

Comments

Popular posts from this blog

ಮಹಾರಾಷ್ಟ್ರದಲ್ಲಿನ ನಿಗೂಢ ಸ್ಥಳಗಳು... - ಜಯ ಸಾಲ್ಯಾನ್ (ಮುಂಬೈ)

ಅಶೋಕ ಸ್ತಂಭದ ಉಗ್ರರೂಪ

ಗಜಾನನ ನಾರಾಯಣ ಜಾಧವ್