ಶ್ರೀ ಕೃಷ್ಣನ ಚಿತ್ರಗಳು

ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿ! ಕೃಷ್ಣ, ಈ ಹೆಸರೇ ಮೋಡಿ ಮಾಡುವಂಥದ್ದು. ಕೋಟಿಗಟ್ಟಲೆ ಭಾರತೀಯರ ಇಷ್ಟ ದೇವತೆ, ರಾಧೆಯ ಪ್ರೇಮಿ, ಗೊಲ್ಲರ ಸ್ನೇಹಿತ, ಭಾರತೀಯರ ಹೃದಯದಲ್ಲಿ ಕೃಷ್ಣನಿಗೆ ಮಹತ್ವದ ಸ್ಥಾನವಿದೆ. ಈ ಜನಪ್ರಿಯ ದೇವತೆಯನ್ನು ಅನೇಕ ಕಲಾವಿದರು ತಮ್ಮ ಕಲಾ ಕುಂಚದಿಂದ ಸುಂದರವಾಗಿ ಚಿತ್ರಿಸಿದ್ದಾರೆ.ಈ ಎಲ್ಲಾ ವರ್ಣಚಿತ್ರಗಳು 17 ರಿಂದ 18ನೇ ಶತಮಾನಕ್ಕೆ ಸೇರಿವೆ. ಈ ಅವಧಿಯಲ್ಲಿ ಹೆಚ್ಚಿನ ಕಲೆ ರಾಜಾಶ್ರಯದ ನೆರವಿನಿಂದಲೇ ಅಭಿವೃದ್ಧಿ ಹೊಂದಿದವು. ಮೊಘಲ್, ಕಾಂಗ್ರಾ ಶೈಲಿಯಲ್ಲಿ ಕಾಣುವ ಈ ವರ್ಣಚಿತ್ರಗಳು ಗಾತ್ರದಲ್ಲಿ ಚಿಕ್ಕದಾದ, ಪರಿಪೂರ್ಣವಿವರಣೆ ಕೊಡುವ ಮತ್ತು ಸೌಂದರ್ಯದ ಉತ್ತಮ ಉದಾಹರಣೆಯಾಗಿದೆ. ಈ ಕಲಾ ಸಂಗ್ರಹವು ಅತ್ಯುತ್ತಮವಾಗಿದ್ದು ದುರದೃಷ್ಟವಶಾತ್ ಇದು ವಿದೇಶಿ ವಸ್ತುಸಂಗ್ರಹಾಲಯಗಳ ವಶದಲ್ಲಿದೆ. ಆದ್ದರಿಂದ, ನಾವು ಈ ಕಲಾಕೃತಿಗಳನ್ನು ಕೇವಲ ಫೋಟೋದಲ್ಲಿ ಮಾತ್ರ ನೋಡಬಹುದು. ಶ್ರೀಮಂತ ಭಾರತೀಯ ಕಲಾ ಸಂಪ್ರದಾಯದಲ್ಲಿ ಚಿತ್ರಿಸಲಾಗಿರುವ ಈ ಕೃಷ್ಣ ವರ್ಣಚಿತ್ರಗಳು ನಿಮಗಾಗಿ...

ಉದ್ಯಾನದಲ್ಲಿ ರಾಧಾಕೃಷ್ಣ (1830)


ಈ ಚಿತ್ರದಲ್ಲಿ ರಾಧಾಕೃಷ್ಣ ಉದ್ಯಾನದಲ್ಲಿ ನಿರಾಳವಾಗಿ ಕುಳಿತಿದ್ದಾರೆ. ಇಬ್ಬರಲ್ಲಿಯೂ ಮಧುರ ಸಂಭಾಷಣೆ ನಡೆಯುತ್ತಿದೆ. ಸೇವಕಿಯರು ಇಂಪಾದ ಲಲಿತವಾದ ಸಂಗೀತವನ್ನು ನುಡಿಸುತ್ತಿದ್ದಾರೆ. ಸೇವಕಿಯರು ಸೇವೆ ಮಾಡಲು ಸಿದ್ಧರಾಗಿದ್ದಾರೆ. ತುಂಬಾ ಸುಂದರ ಮತ್ತು ಸೂಕ್ಷ್ಮ ವಿವರಗಳೊಂದಿಗೆ ಚಿತ್ರಿಸಿದ ಉದ್ಯಾನವು ಹೃದಯಸ್ಪರ್ಶಿಯಾಗಿದೆ. ಈ ಚಿತ್ರ ಪಹಾರಿ ಚಿತ್ರಶೈಲಿಯಲ್ಲಿದ್ದು, ಪ್ರಸ್ತುತ ಬ್ರಿಟಿಷ್ ಮ್ಯೂಸಿಯಂ ಸಂಗ್ರಹದಲ್ಲಿದೆ.

ಗೋಪಿಕೆಯರನ್ನು ಗೋಳಾಡಿಸುವ ಶ್ರೀ ಕೃಷ್ಣ (1610)
ಭಾರತೀಯ ಸಮಾಜದಲ್ಲಿ ನಗ್ನತೆ ಮತ್ತು ಅಶ್ಲೀಲತೆಯಲ್ಲಿನ ಅಂತರವನ್ನು ತಿಳಿದಿತ್ತು. ವಿಕ್ಟೋರಿಯನ್ ಯುಗದಿಂದ ನಗ್ನತೆಯನ್ನು ಅಶ್ಲೀಲವೆಂದು ಪರಿಗಣಿಸಲಾಗಿದೆ. ಅದಕ್ಕೂ ಮೊದಲು ನಮ್ಮ ಸಮಾಜವು ಉದಾರ ದೃಷ್ಟಿಕೋನವನ್ನು ಹೊಂದಿತ್ತು, ಆದ್ದರಿಂದ ಇಲ್ಲಿ ಕೃಷ್ಣನು ಯಮುನೆಯಲ್ಲಿ ಸ್ನಾನ ಮಾಡುತ್ತಿದ್ದ ಗೋಪಿಕೆಯರ ಬಟ್ಟೆಗಳನ್ನು ಕದಿಯುವುದನ್ನು ನೋಡುತ್ತೇವೆ. ಮರದ ಮೇಲೆ ಕುಳಿತ ಕೃಷ್ಣ, ಹತ್ತಿರದ ಕೊಂಬೆಯಲ್ಲಿ ನೇತಾಡುವ ಬಟ್ಟೆ, ಬಟ್ಟೆಗಾಗಿ ವಿನಂತಿಸುವ ಗೋಪಿಕೆಯರು, ಮತ್ತು ಯಮುನೆಯ ಹರಿಯುವ ನೀರು, ಈ ಎಲ್ಲಾ ವಿಷಯಗಳನ್ನು ಈ ಒಂದು ಚಿತ್ರದಲ್ಲಿ ಚಿತ್ರಿಸಲಾಗಿದೆ. ಇದು ರಾಜಸ್ಥಾನಿ ಪೇಂಟಿಂಗ್ ಆಗಿದ್ದು, ಪ್ರಸ್ತುತ ನ್ಯೂಯಾರ್ಕ್ನ ಮೆಟ್ರೋಪಾಲಿಟನ್ ಮ್ಯೂಸಿಯಂ ವಶದಲ್ಲಿದೆ.

ಕೋಪಗೊಂಡ ರಾಧಾ, ಚಿಂತೆಯಲ್ಲಿದ್ದ ಕೃಷ್ಣ (1820-30)
ರಾಧಾ-ಕೃಷ್ಣರ ಸಂಬಂಧವು ಹಲವು ಪದರಗಳನ್ನು ಹೊಂದಿದೆ. ರಾಧಾ ಕೃಷ್ಣನಿಗಾಗಿ ಕಾಯುತ್ತಿದ್ದಾಳೆ, ಆದರೆ ಕೃಷ್ಣನಿಗೆ ಬರಲು ತಡವಾಗಿದೆ. ಈ ಚಿತ್ರದಲ್ಲಿ ಕೃಷ್ಣ ಭೇಟಿಗೆ ತಡವಾಗಿ ಬರುತ್ತಾನೆ. ರಾಧಾ ಬೇಸರಗೊಂಡಿದ್ದಾಳೆ. ಕೃಷ್ಣ ತಡವಾಗಿಬಂದ ಕಾರಣವನ್ನು ಹೇಳಿದರೂ ರಾಧೆ ಏನನ್ನೂ ಕೇಳುವ ಮನಸ್ಥಿತಿಯಲ್ಲಿ ಇಲ್ಲ. ಅವಳು ಒಂದು ಕೈಯಿಂದ ಕೃಷ್ಣನನ್ನು ಸಮೀಪ ಬರಲು ನಿರಾಕರಿಸುತ್ತಾಳೆ ಮತ್ತು ಇನ್ನೊಂದು ಕೈಯಿಂದ ಕಿವಿ ಮುಚ್ಚಿಕೊಳ್ಳುತ್ತಾಳೆ, ಅವಳು ಕೃಷ್ಣನಿಂದ ಏನನ್ನೂ ಕೇಳಲು ಬಯಸುವುದಿಲ್ಲ. ಎಂತಹ ಸುಂದರ ನಿದರ್ಶನ! ರಾಧೆಯ ನಿರಾಕರಣೆ ಮತ್ತು ಕೃಷ್ಣನ ಮುಜುಗರದ ಭಾವಗಳನ್ನು ಇಲ್ಲಿ ಕಾಣಬಹುದು. ಈ ವರ್ಣಚಿತ್ರವು ಕಾಂಗ್ರಾ ಶೈಲಿಯಲ್ಲಿದೆ ಮತ್ತು ಪ್ರಸ್ತುತ ಬ್ರೂಕ್ಲಿನ್ ವಸ್ತುಸಂಗ್ರಹಾಲಯದ ಸಂಗ್ರಹದಲ್ಲಿದೆ.

ಗೋಪಿಕೆಯರು ಮತ್ತು ಕೃಷ್ಣ (18ನೇ ಶತಮಾನ)
ಕೃಷ್ಣ ನಮ್ಮೆಲ್ಲರ ದೇವರು. ಆದರೆ ಈ ಚಿತ್ರದಲ್ಲಿ ಅವರು ರಾಧೆಯ ಪಾದಗಳಮೇಲೆ ಚಿತ್ರ ಬಿಡಿಸಿ, ಬಣ್ಣ ಹಚ್ಚುತ್ತಿದ್ದಾರೆ. ಪ್ರೀತಿಯಲ್ಲಿ ಆಕಂಠ ಮುಳುಗಿದ ಪ್ರೇಮಿ ರಾಧಾಕೃಷ್ಣ. ದೈವತ್ವವನ್ನು ಬದಿಗಿಟ್ಟು ತಮ್ಮ ಪ್ರಿಯತಮೆಯನ್ನು ಮುದ್ದಿಸಿ ಪ್ರೀತಿಸುವ ಕೃಷ್ಣನನ್ನು ನೋಡಿ ನಾವು ಬೆರಗಾಗುತ್ತೇವೆ. ಬದಿಯಲ್ಲಿ ನಿಂತಿರುವ ಸೇವಕಿಯೂ ಕೃಷ್ಣನು ಮಾಡುತ್ತಿದ್ದ ಈ ಕೆಲಸವನ್ನು ನೋಡಿ ಆಶ್ಚರ್ಯ ಪಡುತ್ತಿದ್ದಾಳೆ. ಕಾಂಗ್ರಾ ಶೈಲಿಯಲ್ಲಿರುವ ಈ ವರ್ಣಚಿತ್ರವನ್ನು ಪ್ರಸ್ತುತ ಫ್ರಾನ್ಸೆಸ್ಕಾ ಗ್ಯಾಲೋವೇ ಆರ್ಟ್ ಗ್ಯಾಲರಿಯಲ್ಲಿ ನೋಡಬಹುದು.

ರಾಧಾಕೃಷ್ಣ ಅವರ ಅರಣ್ಯ ಭೇಟಿ (1770):


ಈ ಚಿತ್ರದಲ್ಲಿ ರಾಧಾ-ಕೃಷ್ಣರು ಕಾಡಿನಲ್ಲಿ ಭೇಟಿಯಾಗುತ್ತಿದ್ದಾರೆ. ಈ ಚಿತ್ರದಲ್ಲಿ ವಿವರವಾಗಿ ಸಾಕಷ್ಟು ಕೆಲಸ ಮಾಡಲಾಗಿದೆ. ರಾಧೆ ಮಾತ್ರವಲ್ಲ, ಗೊಲ್ಲರು, ಗೋಪಿಕೆಯರು ಮತ್ತು ಹಸುಗಳೂ ಕೃಷ್ಣನನ್ನು ಭೇಟಿಯಾಗಲು ಉತ್ಸುಕರಾಗಿರುತ್ತಾರೆ. ನವಿಲು ಕೂಡ ತನ್ನ ಗರಿಗಳನ್ನು ಅರಳಿಸಿಕೊಂಡು ಕೃಷ್ಣನ ದರ್ಶನವನ್ನು ಆನಂದಿಸುತ್ತಿದೆ. ಈ ಮೊಘಲ್ ಶೈಲಿಯ ಚಿತ್ರವು ಪ್ರಸ್ತುತ ಕ್ಲೀವ್ಲ್ಯಾಂಡ್ ಮ್ಯೂಸಿಯಂ ಆಫ್ ಆರ್ಟ್ ಸಂಗ್ರಹದಲ್ಲಿದೆ.

ಜೋಕಾಲಿ ಮೇಲೆ ರಾಧಾಕೃಷ್ಣ (1780):

ಈ ಚಿತ್ರದಲ್ಲಿ ರಾಧಾ-ಕೃಷ್ಣರು ಜೋಕಾಲಿ ಮೇಲೆ ಕುಳಿತಿದ್ದಾರೆ. ಮೇಲೆ ತೆರೆದ ಆಕಾಶವಿದೆ. ಸೇವಕಿ ಸೇವೆಗಾಗಿಸಿದ್ಧವಾಗಿದ್ದಾಳೆ. ಹಾಸಿಗೆಯ ಮೇಲಿನ ವಿವರ, ಸೂಕ್ಷ್ಮ ಸುಂದರ ಕಲಾಕೃತಿಯನ್ನು ನೋಡಬಹುದು. ಎಡಭಾಗದಲ್ಲಿ ದಾಸಿ ವಾದ್ಯ ಆಡಿಸುತ್ತಿದ್ದಾಳೆ. ಹಿಂದೆ ದಟ್ಟವಾದ ಪೊದೆಗಳಿವೆ. ಕಡು ಹಸಿರು ಹಿನ್ನೆಲೆಯಲ್ಲಿ ರಾಧಾಕೃಷ್ಣ ಆಕೃತಿಯು ಪ್ರಬಲವಾಗಿ ಕಾಣುತ್ತಿದೆ. ರಾಧಾಕೃಷ್ಣ ಅವರ ಆಸನ ಮಧ್ಯದಲ್ಲಿ ಇರುವುದರಿಂದ ಅವರತ್ತ ಗಮನ ಕೇಂದ್ರೀಕೃತವಾಗುತ್ತದೆ. ಈ ಮೊಘಲ್ ಶೈಲಿಯ ವರ್ಣಚಿತ್ರವನ್ನು ಕ್ರಿಸ್ಟೀಸ್ ಅವರು 2021 ರಲ್ಲಿ ಹರಾಜಿಗೆ ಇಟ್ಟಿದ್ದರು.

- ಜಯ ಸಾಲ್ಯಾನ್

Comments

Post a Comment

Popular posts from this blog

ಮಹಾರಾಷ್ಟ್ರದಲ್ಲಿನ ನಿಗೂಢ ಸ್ಥಳಗಳು... - ಜಯ ಸಾಲ್ಯಾನ್ (ಮುಂಬೈ)

ಅಶೋಕ ಸ್ತಂಭದ ಉಗ್ರರೂಪ

ಗಜಾನನ ನಾರಾಯಣ ಜಾಧವ್